ಮಾಲ್ಟ
ಮೆಡಿಟರೇನಿಯನ್ ಸಮುದ್ರದಲ್ಲಿರುವ ಸ್ವತಂತ್ರ ದ್ವೀಪಸ್ತೋಮ. ಸಿಸಿಲಿಯ ದಕ್ಷಿಣದಲ್ಲಿ ಸುಮಾರು 97 ಕಿಮೀ ದೂರದಲ್ಲಿದೆ. ಮಾಲ್ಟ, ಗಾಟೊ, ಕಮೀನೊ ಮತ್ತು ಜನವಸತಿಯಿಲ್ಲದ ಕಮೀನೊಟೊ ಹಾಗೂ ಫಿಲ್ಫಾ ಐದು ದ್ವೀಪಗಳ ಒಟ್ಟು ವಿಸ್ತೀರ್ಣ 316 ಚಕಿಮೀ. ಇವುಗಳಲ್ಲಿ ದೊಡ್ಡದಾದ ಮಾಲ್ಟ ದ್ವೀಪ ಒಂದೇ 246 ಚಕಿಮೀ ವಿಸ್ತೀರ್ಣವಿದ್ದು ಈ ಪೈಕಿ 100ಕಿಮೀ ತೀರ ಪ್ರದೇಶವಿದೆ. ಜನಸಂಖ್ಯೆ 3,29,189 (1983). ರಾಜಧಾನಿ ಮತ್ತು ಆಡಳಿತ ಕೇಂದ್ರ ಹಾಗೂ ಬಂದರು ನಗರ ವಲೆಟ. ಜನಸಂಖ್ಯೆ 14,000 (1983).

	ಮೇಲ್ಮೈಲಕ್ಷಣ : ಮಾಲ್ಟ ದ್ವೀಪ ಹವಳಗಲ್ಲು ಸ್ತರಗಳಿರುವ ಸುಣ್ಣಕಲ್ಲಿನ ತ್ರಿಕೋಣಾಕಾರದ ಪ್ರಸ್ತಭೂಮಿ. ಇದನ್ನು ನೀಲಿ ಜೇಡಿಮಣ್ಣಿನ ಇಳಕಲುಗಳು ಸುತ್ತುವರಿದಿವೆ. ದ್ವೀಪದ ಉತ್ತರದಲ್ಲಿಯ ಇಳಿಜಾರು ಪ್ರದೇಶ ಕಡಿದಾದ ಪ್ರಪಾತಗಳಿಂದ ಕೂಡಿದೆ. ದಕ್ಷಿಣದಲ್ಲಿಯ ಪ್ರದೇಶ ಸುಮಾರು 121.6 ಮೀಟರ್‍ಗಳಿಗೂ ಕಡಿಮೆ ಎತ್ತರಕ್ಕೆ ಇಳಿಜಾರಾಗಿದೆ. ದ್ವೀಪದ ಪಶ್ಚಿಮದಲ್ಲಿ ಆಳವಾದ ಕಣಿವೆಗಳೂ ಕಡಿದಾದ ಪ್ರಪಾತಗಳೂ ಇವೆ. ಪೂರ್ವದಲ್ಲಿಯ ಕಣಿವೆಗಳು ಮಧ್ಯದ ಬಯಲು ಪ್ರದೇಶದವರೆಗೂ ಮುಂದುವರಿದಿವೆ. ಗಾಟ್ಸೊದ ಉತ್ತರದಲ್ಲಿಯ ಹವಳಗಲ್ಲುಗಳಿಂದಾದ ಪ್ರಸ್ತಭೂಮಿಯ ದಕ್ಷಿಣದಲ್ಲಿ ಸುಣ್ಣಕಲ್ಲುಗಳಿಂದ ಕೂಡಿದ ಬಯಲು ಪ್ರದೇಶಗಳೂ ಗುಡ್ಡಗಳೂ ಇವೆ. ಮಾಲ್ಟದ ಪಶ್ಚಿಮ ತೀರ ಪ್ರದೇಶದಲ್ಲಿ ಬಂದರುಗಳಿಲ್ಲ. ಮರ್ಸಾಮ್ ಸೆಟ್ ಕೊಲ್ಲಿಯನ್ನೂ ತೀರದ ಪೂರ್ವಗ್ರಾಂಡ್ ಹಾರ್ಬರನ್ನೂ ಮೌಂಡ್ ಸೆಬರಸ್ ಪ್ರದೇಶ ಪ್ರತ್ಯೇಕಿಸುತ್ತದೆ. ಉತ್ತರ ತೀರಪ್ರದೇಶ ಕಡಿದಾದ ಬಂಡೆಗಳಿಂದಲೂ ಸಣ್ಣ ಸಣ್ಣ ಕೊಲ್ಲಿಗಳಿಂದಲೂ ಕೂಡಿದ್ದು ಮಧ್ಯೆ ಮಧ್ಯೆ ಫಲವತ್ತಾದ ತಗ್ಗುಪ್ರದೇಶವನ್ನೊಳಗೊಂಡಿದೆ.

	ಇಲ್ಲಿ ಮಳೆಗಾಲದಲ್ಲಿ ಮಾತ್ರ ಸ್ವಲ್ಪದಿನ ಹರಿಯುವ ಕೆಲವು ಸಣ್ಣ ಪುಟ್ಟ ನದಿ ತೊರೆಗಳಿವೆ. ಇವುಗಳಿಂದ ದ್ವೀಪವಾಸಿಗಳಿಗೆ ಕುಡಿಯಲು ಸಹ ನೀರು ಪೂರೈಕೆ ಆಗದು. ಆದರೆ ಈ ದ್ವೀಪದ ನೆಲದಡಿಯಲ್ಲಿ ನೀರು ಸಂಗ್ರಹವಾಗಲು ಅನುಕೂಲವಾದ ಭೌಗೋಳಿಕ ಸನ್ನಿವೇಶವಿದೆ. ಇಲ್ಲಿ ಆ ಬಗೆಯ ಎರಡು ನೀರಿನ ಸಂಗ್ರಹಗಳಿದ್ದು ನೀರು ಸುತ್ತಲೂ ಹರಡಿ ಹರಿದುಹೋಗದಂತೆ ನೀಲಿಬಣ್ಣದ ಜೇಡಿಮಣ್ಣು ಮತ್ತು ಸುಣ್ಣಕಲ್ಲಿನ ರಚನೆಯಿದೆ. ಸಾರ್ವಜನಿಕ ನೀರು ಸರಬರಾಜಿಗೆ ಈ ಸಂಗ್ರಹವೇ ಆಧಾರ. ಜೊತೆಗೆ ಸಮುದ್ರದ ನೀರನ್ನು ಶುದ್ಧಿಗೊಳಿಸಿ ಬಟ್ಟಿ ಇಳಿಸುವ ಯಂತ್ರಗಳನ್ನು ಸ್ಥಾಪಿಸಲಾಗಿದೆ.

	ವಾಯುಗುಣ : ಮೆಡಿಟರೇನಿಯನ್ ಹವಾಗುಣವಿದ್ದು ತೀವ್ರ ಹಾಗೂ ಶುಷ್ಕವಾದ ಬೇಸಗೆಯೂ ಬೆಚ್ಚನೆಯ ಮತ್ತು ಸ್ವಲ್ಪ ತೇವದಿಂದೊಡಗೂಡಿದ ಶರತ್ಕಾಲವೂ ಅಲ್ಪಕಾಲದ ಹಾಗೂ ತಕ್ಕಷ್ಟು ಮಳೆ ಬೀಳುವ ಚಳಿಗಾಲವೂ ಇಲ್ಲಿಯ ಹವಾವೈಶಿಷ್ಟ್ಯ. ಸುಮಾರು ಮುಕ್ಕಾಲು ಭಾಗದಷ್ಟು ಹಿಮದ ಮಳೆ ಅಕ್ಟೋಬರ್ ಮತ್ತು ಮಾರ್ಚಿ ತಿಂಗಳುಗಳ ನಡುವೆ ಆಗುತ್ತದೆ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಸಾಮಾನ್ಯವಾಗಿ ಮಳೆ ಬೀಳುವುದಿಲ್ಲ. ತೇವಾಂಶ ಯಾವಾಗಲೂ ಹೆಚ್ಚಾಗಿಯೇ ಇರುತ್ತದೆ. ಇಲ್ಲಿಯ ಉಷ್ಣತೆ ಸಾಧಾರಣವಾಗಿ ಸ್ಥಿರವಾಗಿದ್ದು ವಾರ್ಷಿಕ ಸರಾಸರಿ 18oಅ ಇರುತ್ತದೆ. ವಾಯವ್ಯ ದಿಕ್ಕಿನ ತಣ್ಣಗಿನ ಮಜಿಸ್ಟ್ರಾಲ್, ಈಶಾನ್ಯ ದಿಕ್ಕಿನ ಶುಷ್ಕವಾದ ಗ್ರಿಗಾಲ್ ಮತ್ತು ಆಗ್ನೇಯ ದಿಕ್ಕಿನ ಬೆಚ್ಚಗಿನ ಹಾಗೂ ತೇವವಾದ ಎಕ್ಸಲಾಕ್ ಎಂಬ ಮಾರುತಗಳು ಬೀಸುತ್ತವೆ.

	ಸಸ್ಯ ಮತ್ತು ಪ್ರಾಣಿಸಂಪತ್ತು : ಮಾಲ್ಟದಲ್ಲಿ ಒತ್ತಾದ ಕಾಡುಗಳಿಲ್ಲ. ಇಲ್ಲಿ ಹೇರಳವಾಗಿ ಆಲೂಗಡ್ಡೆ, ಈರುಳ್ಳಿ, ಟೊಮಾಟೋ, ದ್ರಾಕ್ಷಿ, ದ್ವಿದಳಧಾನ್ಯ ಜಾತಿಯ ಮೇವಿನ ಬೆಳೆಯಾದ ಸುಲ್ಲ ಇವನ್ನು ಬೆಳೆಸುತ್ತಾರೆ. ಇಲ್ಲಿಯ ವೃಕ್ಷಗಳಲ್ಲಿ ಕ್ಯಾರೊಬ್, ಅಂಜೂರ, ಚೇಸ್ಟ್ ಮುಖ್ಯವಾದವು. ಸಮುದ್ರತೀರದಲ್ಲಿ ಗೋಲ್ಡನ್ ಮತ್ತು ರಾಕ್ ಸಾಂಫೈರ್ಸ್ ಸೀಕ್ಯಾಂಪಿಯಸ್, ಸ್ಪರ್ಜ್ ಎಂಬ ಕಳ್ಳಿ ಜಾತಿಯ ಗಿಡಗಳು, ಸಾಲ್ಟ್‍ವೊರ್ಟ್ ಮತ್ತು ಮುರಮ್ ಹುಲ್ಲು ಬೆಳೆಯುತ್ತವೆ. ಮುಳ್ಳು ಹಂದಿ, ಮುಂಗುಸಿ ಅಥವಾ ವೀಸೆಲ್‍ಷ್ರೂ ಎಂಬ ಇಲಿಯ ಜಾತಿಗೆ ಸೇರಿದ ಸಣ್ಣ ಪ್ರಾಣಿಗಳು, ಬಾವಲಿ ಮುಂತಾದವುಗಳಿವೆ. ವಾರ್ಬಲರ್ ಹಾಗೂ ತ್ರಷ್ ಜಾತಿಯ ಮತ್ತು ಲಿನೆಟ ಎಂಬ ಕಂದುಬಣ್ಣದ ಹಾಡುಹಕ್ಕಿಗಳು, ಅನೇಕ ಜಾತಿಯ ಗೂಬೆಗಳು, ವಲಸೆ ಬಂದು ಹೋಗುವ ಆಸ್ಟ್ರೆ ಎಂಬ ಕಡಲಹದ್ದು, ರಾಕ್ ಮತ್ತು ರೋಲರ್ ಜಾತಿಗೆ ಸೇರಿದ ಪಾರಿವಾಳಗಳು, ಸ್ವಾಲೋಹಕ್ಕಿ, ಕೋಗಿಲೆ ಮುಂತಾದ ವಿವಿಧ ಪಕ್ಷಿಗಳನ್ನು ಕಾಣಬಹುದು.

	ಆಡಳಿತ : 1964ರಲ್ಲಿ ರಚಿತವಾದ ರಾಜ್ಯಾಂಗದ ಅನುಸಾರವಾಗಿ ಮಾಲ್ಟದಲ್ಲಿ ಬ್ರಿಟಿಷ್ ಮಾದರಿಯ ಪ್ರಜಾಪ್ರತಿನಿಧಿ ಸರ್ಕಾರವಿದೆ. ಇಲ್ಲಿಯದು ಏಕಸಭಾ ಶಾಸನಸಭೆ. ಇದರಲ್ಲಿ 55 ಸದಸ್ಯರಿದ್ದಾರೆ. 18 ವರ್ಷ ಮೀರಿದ ವಯಸ್ಕ ಮತದಾನದಿಂದ ಐದುವರ್ಷಗಳಿಗೊಮ್ಮೆ ಇವರು ಚುನಾಯಿತರಾಗುತ್ತಾರೆ. ಮಂತ್ರಿಮಂಡಲ ಪ್ರಧಾನಮಂತ್ರಿ ಹಾಗೂ ಇತರ ಮಂತ್ರಿಗಳಿಂದ ಕೂಡಿದ್ದು ಶಾಸನಸಭೆಗೆ ಜವಾಬುದಾರಿಯಾಗಿರುತ್ತದೆ. ಇಲ್ಲಿ ಸ್ಥಳೀಯ ಸರ್ಕಾರಗಳಾವುವೂ ಇಲ್ಲವಾದರು ಗಾಟ್ಸೊ ದ್ವೀಪಕ್ಕೆ ಸ್ವಲ್ಪಮಟ್ಟಿನ ಸ್ಥಳೀಯ ಅಧಿಕಾರ ನೀಡಲಾಗಿದೆ. ಮೂಲಭೂತ ಹಕ್ಕುಗಳಿಗೆ ಹಾಗೂ ವ್ಯಕ್ತಿ ಸ್ವಾತಂತ್ರ್ಯಕ್ಕೆ ರಾಜ್ಯಾಮಗದ ರಕ್ಷಣೆಯಿದೆ. ಇಂಗ್ಲಿಷ್, ಮಾಲ್ಟೀಸ್ ಇಲ್ಲಿಯ ಅಧಿಕೃತ ಭಾಷೆಗಳು. ರಾಷ್ಟ್ರೀಯ ಧರ್ಮ ರೋಮನ್ ಕ್ಯಾಥೊಲಿಕ್ ಆದರೂ ಎಲ್ಲ ಮತಧರ್ಮಗಳಿಗೆ ಮುಕ್ತಸ್ವಾತಂತ್ರ್ಯವಿದೆ. ಮಾಲ್ಟದ ರಕ್ಷಣೆಯನ್ನು 1964ರ ಆಂಗ್ಲೊ-ಮಾಲ್ಟೀಸ್ ರಕ್ಷಣ ಒಪ್ಪಂದದ ಅನುಸಾರವಾಗಿ 1964ರಿಂದ 1972ರ ತನಕ ಬ್ರಿಟನ್ನು ವಹಿಸಿಕೊಂಡಿತ್ತು. ಈ ರಾಷ್ಟ್ರಕ್ಕೆ ಈಗ ತನ್ನದೇ ಆದ ಸೇನಾ ವ್ಯವಸ್ಥೆಯಿದ್ದು ತಟಸ್ಥ ನೀತಿಯನ್ನು ಅನುಸರಿಸುತ್ತಿದೆ.

	ಆರ್ಥಿಕ ಪರಿಸ್ಥಿತಿ : ಮಾಲ್ಟದಲ್ಲಿ ಸಿಗುವ ಏಕೈಕ ಖನಿಜ ಸಂಪತ್ತು ಗ್ಲೋಬಿಗರಿನಾ ಎಂಬ ಸುಣ್ಣದ ಕಲ್ಲು. ಇದನ್ನು ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಉಪಯೋಗಿಸುತ್ತಾರೆ. ಇಲ್ಲಿಯ ಆಳವಾದ ಬಂದರುಗಳು ಸೇನೆಯ ಹಾಗೂ ನೌಕಾದಳದ ಆಯಕಟ್ಟಿನ ಪ್ರಮುಖ ನೆಲೆ ಮತ್ತು ಇಂಧನವನ್ನು ತುಂಬುವ ಸ್ಥಳಗಳಾಗಿದ್ದು ದೇಶಕ್ಕೆ ಆದಾಯ ತರುತ್ತವೆ. 1959-71 ಅವಧಿಯಲ್ಲಿ ಕೈಗಾರಿಕೆ ಮತ್ತು ಪ್ರವಾಸೋದ್ಯಮಗಳಲ್ಲಿ ಖಾಸಗಿ ಬಂಡವಾಳ ತೊಡಗಿಸಲು ಉತ್ತೇಜನ ನೀಡುವುದಕ್ಕಾಗಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಲಾಯಿತು. ದೊಡ್ಡ ಕೈಗಾರಿಕೆಗಳನ್ನು ಆಕರ್ಷಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಯಿತು. ಸಾಗರದಲ್ಲಿ ತೈಲಕ್ಕಾಗಿ ಶೋಧನೆಯನ್ನು ಆರಂಭಿಸಲಾಯಿತು.

	1960ರ ದಶಕದ ಉತ್ತರಾರ್ಧದಲ್ಲಿ ಪ್ರವಾಸಿಗಳ ಸಂಖ್ಯೆ ಏರಿದುದರಿಂದ ಹೆಚ್ಚು ಹೋಟೆಲುಗಳನ್ನು ಕಟ್ಟಲಾಯಿತು. ಇಂದಿಗೂ ಇಲ್ಲಿ ಪ್ರವಾಸಿ ಉದ್ಯಮ ಅತ್ಯಂತ ಲಾಭದಾಯಕವಾಗಿದೆ. ಗೃಹಕೈಗಾರಿಕೆಯಾಗಿ ಪರಂಪರಾಗತವಾದ ಬೆಳ್ಳಿಯ ಸೂಕ್ಷ್ಮ ತಂತಿಗಳಿಂದ ಮಾಡುವ ನಾಜೂಕು ಕೆಲಸ ಮತ್ತು ಲೇಸ್‍ನ ತಯಾರಿಕೆ ಮುಂದುವರಿಯುತ್ತಿದೆ.

	ವ್ಯವಸಾಯ ಮತ್ತು ಮೀನುಗಾರಿಕೆ : ಇಲ್ಲಿಯ ಭೂಮಿ ಫಲವತ್ತಾಗಿಲ್ಲ. ಇರುವ ಕೃಷಿಯೋಗ್ಯ ಜಮೀನು ಇಳಕಲಾದ ಅಂತಸ್ತುಗಳಿಂದ ಕೂಡಿರುವುದರಿಂದ ಯಾಂತ್ರೀಕರಣ ಸಾಧ್ಯವಿಲ್ಲ. ಜೊತೆಗೆ ನೀರಿನ ಸರಬರಾಜು ಸಾಕಷ್ಟಿಲ್ಲ. ಈ ಕಾರಣಗಳಿಂದ ಇಲ್ಲಿಯ ಕೃಷಿರಂಗ ಪ್ರಗತಿಹೊಂದಲು ಸಾಧ್ಯವಾಗಿಲ್ಲ. ಇವು ಸಾಲದೆ ದೊಡ್ಡ ಪ್ರಮಾಣದಲ್ಲಿ ಆಹಾರ ಮತ್ತು ಪಾನೀಯಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಗೋದಿ, ತರಕಾರಿ, ಹಣ್ಣುಗಳನ್ನು ತಕ್ಕಮಟ್ಟಿಗೆ ಬೆಳೆಸುತ್ತಾರೆ. ಮಾಂಸ, ಹಾಲಿನ ಪದಾರ್ಥಗಳು, ತರಕಾರಿ, ಹಣ್ಣು, ಬಟ್ಟೆಗಳು, ಪೆಟ್ರೋಲ್, ಯಂತ್ರಗಳು, ಸಾರಿಗೆ ಉಪಕರಣಗಳು, ರಬ್ಬರ್, ಕಬ್ಬಿಣ, ಉಕ್ಕು ಮುಂತಾದವನ್ನು ಆಮದು ಮಾಡಿಕೊಳ್ಳುತ್ತಾರೆ. ನೂಲು, ವಿದ್ಯುಚ್ಛಕ್ತಿ ಉಪಕರಣಗಳು, ಆಲೂಗಡ್ಡೆ, ಸ್ಯಾನಿಟರಿ ಉಪಕರಣಗಳನ್ನು ರಫ್ತುಮಾಡುವರು. ಸುತ್ತಲ ಸಾಗರದಲ್ಲಿ ಮೀನುಗಳ ಸಂಖ್ಯೆ ಕಡಿಮೆಯಿರುವುದರಿಂದ ಮೀನು ಹಿಡಿಯಲು ಸಣ್ಣದೋಣಿಗಳನ್ನು ಉಪಯೋಗಿಸುತ್ತಾರೆ. ಮೀನುಗಾರಿಕೆ ಸಾಕಷ್ಟು ಅಭಿವೃದ್ಧಿ ಹೊಂದಿಲ್ಲ.

	ಸಾಮಾಜಿಕ ವ್ಯವಸ್ಥೆ : ರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಅಥವಾ ಆರೋಗ್ಯ ರಕ್ಷಣಾ ವ್ಯವಸ್ಥೆ ಇಲ್ಲದಿದ್ದರೂ ಜಿಲ್ಲಾಮಟ್ಟದಲ್ಲಿ ವೈದ್ಯಕೀಯ ಸೌಲಭ್ಯಗಳುಂಟು. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಕೊಡಬೇಕಾದ ಹಣವನ್ನು ರೋಗಿಯ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಕಡಿಮೆ ಅಥವಾ ಮನ್ನಾ ಮಾಡಲಾಗುತ್ತದೆ. ಇದಲ್ಲದೆ ಖಾಸಗಿ ವೈದ್ಯಕೀಯ ಸೌಲಭ್ಯಗಳೂ ಸಿಗುತ್ತವೆ. 1961ರ ರಾಷ್ಟ್ರೀಯ ವಿಮಾ ಶಾಸನದ ಅನುಸಾರವಾಗಿ ಮಹಿಳೆಯರಿಗೆ ಮಾತ್ರ ಮದುವೆ, ರೋಗರುಜಿನಗಳು, ನಿರುದ್ಯೋಗ, ವೈಧವ್ಯ, ತಬ್ಬಲಿತನ, ದೌರ್ಬಲ್ಯ, ವೃದ್ಧಾಪ್ಯ ಮತ್ತು ಕೈಗಾರಿಕೆಗಳಲ್ಲಿ ಉಂಟಾಗುವ ಅಪಘಾತ-ಇವುಗಳಿಗೆ ಮಿತವಾದ ಧನ ಸಹಾಯ ನೀಡಲಾಗುತ್ತದೆ. 1956 ಅಕ್ಟೋಬರ್ 26ರ ಒಪ್ಪಂದದ ಅನುಸಾರವಾಗಿ ಮಾಲ್ಟ ಹಾಗೂ ಗ್ರೇಟ್ ಬ್ರಿಟನ್ನುಗಳ ನಡುವೆ ಸಾಮಾಜಿಕ ವಿಮೆಯಲ್ಲಿ ಪರಸ್ಪರ ಸಹಕಾರದ ಏರ್ಪಾಡಿದೆ. ವಸತಿ ಸಮಸ್ಯೆ ತೀವ್ರವಾಗಿರುವುದರಿಂದ ಸರ್ಕಾರ ಬಾಡಿಗೆ ಆಧಾರದ ಮೇಲೆ ಅಪಾರ್ಟ್‍ಮೆಂಟ್ ಮತ್ತು ಮನೆಗಳನ್ನು ಒದಗಿಸಲು ಯೋಜನೆ ಮಾಡಿದೆ. 1956ರ ರಾಷ್ಟ್ರೀಯ ಸಹಾಯಶಾಸನದ ಅನುಸಾರವಾಗಿ ಸಾಮಾಜಿಕ ಹಾಗೂ ವೈದ್ಯಕೀಯ ಸಹಾಯಗಳಿಗೆ ಅವಕಾಶವಿದೆ. 1948ರ ವೃದ್ಧಾಪ್ಯ ವೇತನ ಶಾಸನದಂತೆ 60 ವರ್ಷ ಮೀರಿದವರಿಗೂ 14 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಕುರುಡರಿಗೂ ವೇತನವನ್ನು ನೀಡಲಾಗುತ್ತದೆ.

	ವಿದ್ಯಾಭ್ಯಾಸ : ಇಲ್ಲಿಯ ವಿದ್ಯಾಭ್ಯಾಸ ಪದ್ಧತಿ ಬ್ರಿಟಿಷ್ ಮಾದರಿಯಲ್ಲಿದೆ ಮತ್ತು ರೋಮನ್ ಕ್ಯಾಥೊಲಿಕ್ ಚರ್ಚಿನ ಸಾಂಪ್ರದಾಯಿಕ ಪ್ರಭಾವಕ್ಕೆ ಒಳಪಟ್ಟಿದೆ. 1946ರಲ್ಲಿ 6 ವರ್ಷಗಳಿಂದ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಪ್ರಾರಂಭಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣವಿದೆ. ಧಾರ್ಮಿಕ ಸಂಸ್ಥೆಗಳಿಂದ ನಡೆಸಲಾಗುವ ಖಾಸಗಿ ಶಾಲೆಗಳೂ ಇವೆ. ಮಾಲ್ಟದ ರಾಯಲ್ ವಿಶ್ವವಿದ್ಯಾಲಯ, ಮಾಲ್ಟ ಕಲಾವಿಜ್ಞಾನ ಮತ್ತು ತಾಂತ್ರಿಕ ಕಾಲೇಜು ಹಾಗೂ ಉಪಾಧ್ಯಾಯರ ಶಿಕ್ಷಣ ಕಾಲೇಜುಗಳಲ್ಲಿ ಉಚ್ಚ ಶಿಕ್ಷಣ ದೊರೆಯುತ್ತದೆ. ರಾಯಲ್ ವಿಶ್ವವಿದ್ಯಾಲಯ 1592ರಲ್ಲಿ ಜೆಸುಯಿಟ್ ಕಾಲೇಜಾಗಿ ಪ್ರಾರಂಭವಾಗಿ 1769ರಲ್ಲಿ ವಿಶ್ವವಿದ್ಯಾಲಯವಾಯಿತು. 

	ಇತಿಹಾಸ : ಮಾಲ್ಟದಲ್ಲಿ ಕ್ರಿ. ಪೂ. 3800 ಕ್ಕಿಂತಲೂ ಹಿಂದಿನ ಪ್ರಾಚ್ಯ ಅವಶೇಷಗಳು ಸಿಕ್ಕಿವೆ. ಹೊಸ ಶಿಲಾಯುಗದ ಬೇಸಾಯಗಾರರು ಘರ್‍ದಲಾಮ್ ಮುಂತಾದೆಡೆಗಳಲ್ಲಿ ಗುಹೆಗಳಲ್ಲೂ ಸ್ಕೊರ್ಬಾ ಮೊದಲಾದ ಹಳ್ಳಿಗಳಲ್ಲೂ ವಾಸವಾಗಿದ್ದರೆಂಬುದಕ್ಕೆ ಆಧಾರಗಳಿವೆ. ಬೊರ್ಗ್‍ಇನ್ ನಾಡುರ್ ಮತ್ತು ಟಾರ್ಸೆನ್‍ನ ಸ್ಮಶಾನಗಳಲ್ಲಿ ಕಂಚಿನ ಯುಗದ ಉಪಕರಣಗಳೂ ಮತ್ತು ಆಯುಧಗಳು ಸಿಕ್ಕಿವೆ. ಇಲ್ಲಿ ಸಿಕ್ಕಿರುವ ಬಂಡಿಗಾಲಿಗಳೇ ಮೊದಲಾದ ಕಬ್ಬಿಣ ಯುಗದ ಅವಶೇಷಗಳು ಕ್ರಿ.ಪೂ. 1200ರಿಂದ 1800ರ ಕಾಲಕ್ಕೆ ಸೇರಿದವೆನ್ನುವರು.

	ಕ್ರಿ. ಪೂ. 8 ಮತ್ತು 6ನೆಯ ಶತಮಾನಗಳ ನಡುವೆ ಸೆಮೆಟಿಕ್ ಸಂಸ್ಕøತಿಯೊಂದಿಗೆ ಸಂಪರ್ಕವಿತ್ತೆಂದು ಹೇಳಲಾಗಿದ್ದರೂ ಇದರ ಬಗ್ಗೆ ಸಾಕಷ್ಟು ಆಧಾರಗಳಿಲ್ಲ ಮಾಲ್ಟದಲ್ಲಿ ಸಿಕ್ಕಿರುವ ಶಾಸನಗಳ ಆಧಾರದ ಮೇಲೆ ಫೀನಿಷಿಯನ್ ಸಂಪರ್ಕದ ಬಗ್ಗೆ ಮಾಹಿತಿ ದೊರೆಯುತ್ತದೆ. ಕ್ರಿ. ಪೂ. 6ನೆಯ ಶತಮಾನದಲ್ಲಿ ಕಾರ್ಥೇಜಿಯನ್ನರು ಇದ್ದರೆಂಬ ಬಗ್ಗೆ ನಾಣ್ಯಗಳು, ಶಾಸನಗಳು ಮತ್ತು ಪ್ಯೂನಿಕ್ ಮಾದರಿಯ ಬಂಡೆ ಸಮಾಧಿಗಳು ಬೆಳಕು ಬೀರುತ್ತವೆ. ಮಾಲ್ಟ ಕ್ರಿ. ಪೂ. 218ರಲ್ಲಿ ರೋಮನ್ನರ ಆಡಳಿತಕ್ಕೆ ಒಳಪಟ್ಟಿತ್ತೆಂಬುದಕ್ಕೆ ಖಚಿತ ಆಧಾರಗಳು ಸಿಕ್ಕಿವೆ. ಕ್ರಿ. ಶ. 395ರಲ್ಲಿ ರೋಮನ್ ಸಾಮ್ರಾಜ್ಯ ವಿಭಜಿತವಾದಾಗ ಮಾಲ್ಟ ಕಾನಸ್ಟಾಂಟಿನೋಪಲಿನ ಆಧಿಪತ್ಯದ ಪೂರ್ವಭಾಗಕ್ಕೆ ಸೇರಿತ್ತು. ಕ್ರಿ. ಶ. 870ರಲ್ಲಿ ಅರಬ್ಬರ ವಶವಾಯಿತು. ಕ್ರಿ. ಶ. 1090ರಲ್ಲಿ ಸಿಸಿಲಿಯ ಆಡಳಿತಕ್ಕೆ ಸೇರಿ 1530ರಲ್ಲಿ ರೋಮನ್ ಕ್ಯಾಥೊಲಿಕ್ ಚರ್ಚಿನ ಧಾರ್ಮಿಕ ಹಾಗೂ ಮಿಲಿಟರಿ ಪಂಗಡದ ಅಧೀನವಾಯಿತು. ಇವರ ಆಡಳಿತ ಕಾಲದಲ್ಲಿ ರಾಜಧಾನಿ ವಲೆಟ ನಗರ ಭವ್ಯವಾದ ಅರಮನೆಗಳಿಂದ ದುರ್ಗಗಳಿಂದ ಅನೇಕ ವಾಸ್ತುಶಿಲ್ಪ ಮತ್ತು ಕಲಾಸಂಪತ್ತಿನಿಂದ ಶೋಭಿಸಿತು.

	1798ರಲ್ಲಿ ಈ ದ್ವೀಪಸ್ತೋಮ ನೆಪೋಲಿಯನ್ನನ ವಶವಾದರೂ ಬ್ರಿಟಿಷರ ನೆರವಿನಿಂದ ಅಮಿಯನ್ಸ್ ಒಪ್ಪಂದದ ಮೂಲಕ ಮತ್ತೆ ನೈಟ್ಸ್ ಆಫ್ ಸೇಂಟ್‍ಜನ್ ಪಂಗಡದವರಿಗೆ ಹಿಂದಿರುಗಿಸಲಾಯಿತು. ಮುಂದೆ 1802ರಲ್ಲಿ ತನ್ನ ಸ್ವಂತ ಇಚ್ಛೆಯಿಂದ ಈ ದೇಶ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. ಅನಂತರ 1814ರ ಪ್ಯಾರಿಸ್ ಒಪ್ಪಂದದ ಮೂಲಕ ಬ್ರಿಟಿಷ್ ಸಾಮ್ರಾಜ್ಯದ ಅಧೀನವಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಈ ದ್ವೀಪದ ಮೇಲೆ ಹೆಚ್ಚುಬಾರಿ ಬಾಂಬ್ ದಾಳಿ ಮಾಡಲಾಯಿತು. ಆ ಯುದ್ಧ ಕಾಲದಲ್ಲಿ ಈ ದೇಶ ತೋರಿದ ದೃಢನಿಷ್ಠೆಗಾಗಿ ಆರನೆಯ ಜಾರ್ಜ್‍ದೊರೆ ಬ್ರಿಟನ್ನಿನ ಅತ್ಯುಚ್ಚ. ನಾಗರಿಕ ಪಾರಿತೋಷಿಕ ಜಾರ್ಜ್‍ಕ್ರಾಸನ್ನು ನೀಡಿದ. 1947ರಲ್ಲಿ ಈ ದ್ವೀಪಸ್ವತಂತ್ರವಾದರು ಇಲ್ಲಿಯ ತುರ್ತು ಪರಿಸ್ಥಿತಿಯ ಕಾರಣ 1959ರಲ್ಲಿ ಮತ್ತೆ ಬ್ರಿಟನ್ನಿನ ಆಡಳಿತಕ್ಕೆ ಒಳಪಡಬೇಕಾಯಿತು. ಮುಂದೆ ಈ ದ್ವೀಪ 1962ರಲ್ಲಿ ಸ್ವತಂತ್ರವಾಗಿ 1964 ಸೆಪ್ಟೆಂಬರ್ 21ರಂದು ಬ್ರಿಟಿಷ್ ಕಾಮನ್‍ವೆಲ್ತಿನ ಒಂದು ರಾಷ್ಟ್ರವಾಯಿತು. ಹಾಗೂ ಅದೇ ವರ್ಷದ ಡಿಸೆಂಬರ್ 1ರಂದು ವಿಶ್ವಸಂಸ್ಥೆಯ ಸದಸ್ಯತ್ವವನ್ನೂ ಪಡೆಯಿತು.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ